ಎಳುಕಳಲು: ಮಕ್ಕಳಲ್ಲಿ ಕಾಣುವ ಎಲುಮುರುಟು ಬೆಳೆದವರಲ್ಲಿ ಕಂಡುಬಂದರೆ ಅದಕ್ಕೆ ‘ಎಳುಕಳಲು’ (ಆಸ್ಪಿಯೋ ಮಲೇಶಿಯಾ) ಎನ್ನುತ್ತಾರೆ. ‘ಡಿ’ ಜೀವಸತ್ವದ ಕೊರತೆಯಿಂದಾಗಿ ಬೆಳೆದಿರುವ ಮೂಳೆಗಳು ಬರುಬರುತ್ತ ಮೆತ್ತಗಾಗುತ್ತವೆ. ಯಾವತ್ತ್ತೂ ಬಿಸಿಲಿನಿಂದ ವಂಚನೆಗೊಂಡು ಪರದೆಯ ಹಿಂದೆ ಬದುಕುವ ಹೆಂಗಸರಲ್ಲಿ ಎಳುಕಳಲು ಹೆಚ್ಚಿಗೆ ಕಾಣಿಸುತ್ತದೆ. ಗಂಡಸರಲ್ಲಿದು ಕಡಿಮೆ, ಬಸುರಿನಲ್ಲಿ, ಮಗುವಿಗೆ ಹಾಲುಣಿಸುವಾಗ ತಾಯಿಗೆ ಸಾಕಾಗುವಷ್ಟು ಕ್ಯಾಲ್ಸಿಯಂ ಸಿಗದಿದ್ದರೆ; ಸಿಕ್ಕ ಕ್ಯಾಲ್ಸಿಯಂ ಪಿಂಡಗೂಸು ಹೀರಿಕೊಳ್ಳುವುದರಿಂದಲೂ ತಾಯಿಯ ಎಲುಬುಗಳು ಮೆತ್ತಗಾಗಿ ಎಲುಕಳಲು ಅಂಕುರಿಸಬಹುದು. ಆಗ ಸುಣ್ಣಾಂಶ ಕಡಿಮೆ ಹೊಂದಿದ ಮೈಯ ಮೂಳೆಗಳು ಮೆತ್ತಗಾಗಿ ಸುಲಭವಾಗಿ ಮುರಿದು ಹೋಗುವುದು. ಇವರು ನೋವಿನಿಂದ ಬಳಲುವಂತಾಗುತ್ತದೆ. ಇಂತಹ ಎಲುಕಳಲನ್ನು ‘ಡಿ’ ಜೀವಸತ್ವವಾದ ಕ್ಯಾಲ್ಸಿಪೆರಾಲ್ ಕೊಟ್ಟು ಉಪಚರಿಸಬೇಕು. ಇದು ಮೂಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗರ್ಭಿಣಿ ಸ್ತ್ರೀಯರಿಗೆ ಶಿಕ್ಷಣ ಕೊಡಬೇಕು, ಸಮತೋಲನ ಆಹಾರ, ಮೀನಿನೆಣ್ಣೆ, ಹಾಲು, ತರಕಾರಿ ಸಾಕಷ್ಟು ಉಪಯೋಗಿಸಿದರೆ ಕೊರತೆಯ ಎಳುಕಳಲು ಆಗದಂತೆ ತಡೆಗಟ್ಟಬಹುದು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ